ತೋಡರಮಲ್, ರಾಜಾ	
	
 	1523 - 1589. ಅಕ್ಬರನ ಒಬ್ಬ ಮಂತ್ರಿ; ಭೂಕಂದಾಯ ವ್ಯವಸ್ಥೆಯ ಸುಧಾರಣೆಗಾಗಿ ಪ್ರಸಿದ್ಧನಾಗಿದ್ದಾನೆ. ಮೊದಲು ಅಕ್ಬರನ ಆಸ್ಥಾನದಲ್ಲಿ ಕಾರಕೂನನಾಗಿದ್ದ ಈತ ತನ್ನ ಬುದ್ಧಿವಂತಿಕೆ ಹಾಗೂ ಕಾರ್ಯದಕ್ಷತೆಯಿಂದ ಬಲು ಬೇಗ ಉನ್ನತಿ ಹೊಂದಿ ಸೈನ್ಯದಲ್ಲಿ ಹಿರಿಯ ಅಧಿಕಾರಿಯಾದ. 1567 ರಲ್ಲಿ ಅಯೋಧ್ಯೆಯ ಸುಭೇದಾರ ಸಿಕಂದರ್ ಶಾಹನನ್ನು ಸೋಲಿಸಿದ. ಅನಂತರ ಒರಿಸ್ಸ, ಬಂಗಾಲ, ಬಿಹಾರ, ಗುಜರಾತ್ ಮುಂತಾದ ಪ್ರಾಂತ್ಯಗಳಲ್ಲಿ ಎದ್ದ ಬಂಡಾಯಗಳನ್ನು ಅಡಗಿಸಿದ. 1584 ರಲ್ಲಿ ಬಂಗಾಲದ ಬಹುಭಾಗವನ್ನು ಗೆದ್ದು ಅದನ್ನೀತ ಅಕ್ಬರನ ಸಾಮ್ರಾಜ್ಯಕ್ಕೆ ಸೇರಿಸಿದ. ಇದನ್ನು ಮೆಚ್ಚಿದ ಅಕ್ಬರ್ ಈತನಿಗೆ ರಾಜಾ ಎಂಬ ಪದವಿ ಕೊಟ್ಟು ಸನ್ಮಾನಿಸಿದ. ತನ್ನ ಜೀವನದ ಕೊನೆಗಾಲದಲ್ಲಿ ಈತ ಅಕ್ಬರನ ಕಂದಾಯ ಹಾಗು ಅರ್ಥ ಮಂತ್ರಿಯಾಗಿ ಕೆಲಸ ಮಾಡಿದ. 											  (ಸಿ.ಕೆ.ಎನ್.ಆರ್.)

	ತೋಡರ್‍ಮಲ್ ಪ್ರಸಿದ್ಧನಾಗಿರುವುದು ಈತ ಮಾಡಿದ ಕಂದಾಯ ಹಾಗೂ ಆಡಳಿತ ಸುಧಾರಣೆಗಳಿಗಾಗಿ. ರಾಜ್ಯದ ಲೆಕ್ಕಪತ್ರ ವ್ಯವಸ್ಥೆಯಲ್ಲಿ ಈತ ಹೊಸ ಕ್ರಮಗಳನ್ನು ಜಾರಿಗೆ ತಂದ. ಮೊದಲಿನಿಂದ ಬಳಕೆಯಲ್ಲಿದ್ದ ಹಿಂದೂಸ್ತಾನೀ ಭಾಷೆಯ ಬದಲಾಗಿ ಲೆಕ್ಕಪತ್ರ ಹಾಗೂ ಆಡಳಿತದಲ್ಲಿ ಪರ್ಷಿಯನ್ ಭಾಷೆಯ ಬಳಕೆಯನ್ನು ಈತ ರೂಢಿಸಿದ. ರಾಜ್ಯದ ಸಾಗುವಳಿ ಜಮೀನ್ನನು ಕರಾರುವಾಕ್ಕಾಗಿ ಅಳೆಯುವುದು, ಒಂದು ಬೀಘಾ ಜಮೀನಿನ ಸರಾಸರಿ ಬೆಳೆಯ ಪರಿಮಾಣ ನಿರ್ಧರಿಸುವುದು, ಈ ಪರಿಮಾಣದ ಆಧಾರದ ಮೇಲೆ ಸರ್ಕಾರಕ್ಕೆ ಸಲ್ಲಬೇಕಾದ ಕಂದಾಯವನ್ನು ನಿರ್ಧರಿಸುವುದು, ಸಂಪತ್ತಿನ ಮೌಲ್ಯಮಾಪನ- ಇವು ತೋಡರ ಮಲ್ ಆಚರಣೆಗೆ ತಂದ ವಿಶೇಷ ಸುಧಾರಣೆಗಳು. ಸಾಗುವಳಿ ಜಮೀನನ್ನು ಫಲವತ್ತಾದ್ದು, ಸಾಧಾರಣ ಮತು ಬರಡು ಎಂದು ವಿಭಾಗಿಸಿದ. ಜಮೀನಿನ ವಿವರಗಳನ್ನೊಳಗೊಂಡ ಪಹಣಿ (ಲೆಕ್ಕಪತ್ರದ) ಪುಸ್ತಕವನ್ನಿಡುವ ಕ್ರಮವನ್ನು ಬಳಕೆಗೆ ತಂದ. ತೋಡರ್‍ಮಲ್ ಆಚರಣೆಗೆ ತಂದ ಅನೇಕ ಸುಧಾರಣೆಗಳು ಭಾರತದಲ್ಲಿ ಇಂದಿಗೂ ಬೇರೆ ಬೇರೆ ರೂಪಗಳಲ್ಲಿ ಬಳಕೆಯಲ್ಲಿವೆ.

ರಾಜಾ ತೋಡರಮಲ್ ಸೈನಿಕನಾಗಿ, ಮಂತ್ರಿಯಾಗಿ ಹೆಸರು ಗಳಿಸಿರುವಂತೆ ಕವಿಯಾಗೂ ಪ್ರಮುಖನಾಗಿದ್ದಾನೆ. ಹಿಂದೀ ಭಾಷೆಯಲ್ಲಿ ಈತ ರಚಿಸಿದ ನೀತಿ ಪದ್ಯಗಳು ಸಿಕ್ಕಿವೆ. ಈತನ ಆಶ್ರಯದಲ್ಲಿ ತೋಡರಾನಂದ, ತೋಡರಪ್ರಕಾಶ, ಸ್ವರಮೇಲಕಲಾನಿಧಿ ಮುಂತಾದ ಗ್ರಂಥಗಳು ರಚನೆಗೊಂಡವು. ತೋಡರಾನಂದ ಅಂದಿನ ಕಾಲದಲ್ಲಿ ರಚಿತವಾದ ಒಂದು e್ಞÁನಕೋಶವೆಂದು ಹೇಳಬಹುದು. ಇದರಲ್ಲಿ ಆಚಾರ, ವ್ಯವಹಾರ, ದಾನ, ಶ್ರಾದ್ಧ, ಪ್ರಾಯಶ್ಚಿತ್ತ, ವಿವೇಕ, ವಿವಾಹ, ಕರ್ಮವಿಪಾಕ ಮುಂತಾದವುಗಳನ್ನು ಕುರಿತ 15ಕ್ಕೂ ಹೆಚ್ಚು ಪ್ರಕರಣಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ